ಹಿಮಾಲಯ ಹಾಗೂ ನೀಲಗಿರಿ ಬೆಟ್ಟದ ಮಧ್ಯದ ಪ್ರದೇಶದಲ್ಲಿ ಇರುವ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿ. ಸಮುದ್ರಮಟ್ಟದಿಂದ 6312 ಅಡಿ ಎತ್ತರವಿರುವ ಮುಳ್ಳಯ್ಯನಗಿರಿ ಕರ್ನಾಟಕದ ಅತಿ ಎತ್ತರವಾದ ಪರ್ವತ. ಮುಳ್ಳಯ್ಯ ಸ್ವಾಮಿಯ ಗದ್ದುಗೆಯನ್ನು ಸಹ ಹೊಂದಿರುವ ಮುಳ್ಳಯ್ಯನಗಿರಿಗೆ ಭಕ್ತಾದಿಗಳು ಹೆಚ್ಚಾಗಿ ಆಗಮಿಸುತ್ತಿರುತ್ತಾರೆ. ಮುಳ್ಳಯ್ಯನಗಿರಿಗೂ ಮುಂಚೆ ಒಂದು ಪ್ರವಾಸಿತಾಣವೂ ಸಿಗಲಿದೆ ಹಾಗೂ ಮುಳ್ಳಯ್ಯನಗಿರಿಗೆ ಬರುವ ಭಕ್ತಾದಿಗಳು ಮೊದಲು ಅಲ್ಲಿಯ ಧಾರ್ಮಿಕ ಕ್ಷೇತ್ರವಾದ ಅಲ್ಲಿ ದೇವರ ದರ್ಶನವನ್ನು ಪಡೆದು ಮುಂದೆ ಸಾಗಬೇಕು ಎಂಬುದು ಅಲ್ಲಿಯ ಸ್ಥಳೀಯರ ಪದ್ಧತಿ. ಧಾರ್ಮಿಕ ಕ್ಷೇತ್ರವಾಗಿರುವ ಸೀತಾಳಯ್ಯನಗಿರಿ ಮುಳ್ಳಯ್ಯನಗಿರಿಯಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.ಮುಳ್ಳಯ್ಯನಗಿರಿ ತಲುಪುವ ಮೊದಲೇ ಸಿಗುವ ಗಿರಿಧಾಮ ಸೀತಾಳಯ್ಯನಗಿರಿ. ಸೀತಾಳಯ್ಯನ ಗಿರಿಯಲ್ಲಿ ಒಂದು ಮಠ ಹಾಗೂ ಸೀತಾಳ ಮಲ್ಲಿಕಾರ್ಜುನ ದೇವಸ್ಥಾನವನ್ನು ಹೊಂದಿದೆ. ಮುಳ್ಳಯ್ಯನಗಿರಿಗೆ ಹೋಗುವವರು ಮೊದಲು ಸೀತಾಳ ಮಲ್ಲಿಕಾರ್ಜುನರ ದರ್ಶನವನ್ನು ಪಡೆದು ನಂತರ ಮುಳ್ಳಯ್ಯನಗಿರಿ ಹೋಗುತ್ತಾರೆ. ಸೀತಾಳ ಮಲ್ಲಿಕಾರ್ಜುನಯ್ಯ ಅಲೆಯು ಶಿವನಿಗೆ ಮುಡಿಪಾಗಿದೆ. ಸೀತಾಳ ಮಲ್ಲಿಕಾರ್ಜುನ ವಿಗ್ರಹವು ಯಾವಾಗಲೂ ನೀರಿನಿಂದ ಆವೃತವಾಗಿರುತ್ತದೆ. ಅರ್ಚಕರು ಪೂಜೆ ಮಾಡುವಾಗ ವಿಗ್ರಹ ಸುತ್ತ ನೀರು ತುಂಬಿಕೊಳ್ಳುವುದು ಭಕ್ತಾದಿಗಳಿಗೆ ನೋಡಲು ಸಿಗುತ್ತದೆ. ಈ ದೇವಾಲಯದಿಂದ ಈ ಸ್ಥಳಕ್ಕೆ ಸೀತಾಳಯ್ಯನಗಿರಿ ಎಂಬ ಹೆಸರು ಕೂಡಾ ಬಂದಿದೆ.ಸೀತಾಳ ಮಲ್ಲಿಕಾರ್ಜುನ ಆಲಯದ ಎಡಭಾಗದಲ್ಲಿ ಒಂದು ಗುಹೆ ಇದೆ, ಈ ಗುಹೆಯು ಮುಳ್ಳಯ್ಯನಗಿರಿ ಬೆಟ್ಟದ ಮೇಲಿರುವ ಮುಳ್ಳಯ್ಯ ಸ್ವಾಮಿಯ ಗದ್ದುಗೆಗೆ ಸಂಪರ್ಕವನ್ನು ಕಲ್ಪಿಸುತ್ತದೆ ಎನ್ನಲಾಗುತ್ತದೆ. ಸೀತಾಳಯ್ಯನಗಿರಿ ಇಂದ ಮುಳ್ಳಯ್ಯನಗಿರಿಗೆ ತಲುಪಲು ರಸ್ತೆ ಮಾರ್ಗದ ಜೊತೆಗೆ ಕಾಲುದಾರಿಯ ಸಹ ಇದೆ. ಬಹಳಷ್ಟು ಭಕ್ತಾದಿಗಳು ಸೀತಾಳಯ್ಯನ ಗಿರಿಯಲ್ಲಿ ವಾಹನವನ್ನು ನಿಲ್ಲಿಸಿ ಅಲ್ಲಿಂದ 3 ಕಿಲೋಮೀಟರ್ ಕಾಲುದಾರಿಯಲ್ಲಿ ನಡೆದು ಮುಳ್ಳಯ್ಯನಗಿರಿಯನ್ನು ತಲುಪುತ್ತಾರೆ. ಈ ಸ್ಥಳದಲ್ಲಿ ಹಲವಾರು ಕನ್ನಡ ಸಿನಿಮಾದ ಚಿತ್ರೀಕರಣವೂ ಸಹ ನಡೆದಿದೆ. ಸೀತಾಳಯ್ಯನಗಿರಿಯು ಚಿಕ್ಕಮಗಳೂರಿನಿಂದ 19 ಕಿಲೋಮೀಟರ್ ದೂರವಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸೀತಾಳಯ್ಯನಗಿರಿಗೆ ಆಗಮಿಸುತ್ತಾರೆ ಎಂದರೆ ತಪ್ಪಾಗಲಾರದು.