ರೇಣುಕಾ ದೇವಿಯು ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗದ ಅಪಾರ ಭಕ್ತಾದಿಗಳಿಗೆ ಕುಲದೇವತೆ. ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವ ಅನೇಕರು ಅಮ್ಮನವರ ಪವಾಡಗಳನ್ನು ಅರಿತು ಕೆಲವೇ ದಿನಗಳಲ್ಲಿ ಅಮ್ಮನವರ ಭಕ್ತಾದಿಗಳು ಆಗುತ್ತಾರೆ. ಹೆಜ್ಜೇನುಗಳ ಗೂಡಿನಿಂದ ಕೂಡಿರುವ ಬೃಹತ್ ಕಲ್ಲುಬಂಡೆಗಳು ದೇವಾಲಯಕ್ಕೆ ಮೇಲ್ಚಾವಣಿ, ಚಪ್ಪರ ಹಾಗೂ ಗೋಡೆ ಆಗಿದೆ. ಈ ದೇವಾಲಯವು ಇರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಹೋಬಳಿಯ ಅಮ್ಮನಗಟ್ಟ ಎಂಬ ಬೆಟ್ಟದಲ್ಲಿ.
ಅಮ್ಮನಘಟ್ಟ ಬೆಟ್ಟವು ಚಿಕ್ಕದಾಗಿದ್ದು ಕೇವಲ 80 ಮೆಟ್ಟಿಲನ್ನು ಹತ್ತಿದರೆ ಸಾಕು ದೇವಾಲಯವನ್ನು ತಲಪಬಹುದು. ಅಮ್ಮನಘಟ್ಟ ಬೆಟ್ಟದಲ್ಲಿ ಜೇನುಕಲ್ಲಮ್ಮ ದೇವಿ ಎಂದು ಪ್ರಖ್ಯಾತಿಯನ್ನು ಪಡೆದು ಕೊಂಡಿದ್ದಾರೆ. ಇಡೀ ಹೊಸನಗರ ತಾಲೂಕಿಗೆ ಜೇನುಕಲ್ಲಮ್ಮ ದೇವಿಯು ಕುಲದೇವತೆ. ಈ ದೇವತೆಯನ್ನು ಭಕ್ತರು ಜೇನಮ್ಮ, ಜೇನುಕಲ್ಲಮ್ಮ ಎಂದು ಕರೆದು ಪೂಜಿಸುತ್ತಾರೆ. ಜೇನುಕಲ್ಲಮ್ಮ ತಾಯಿಗೆ ಹರಕೆಯನ್ನು ಹೊತ್ತಿಕೊಂಡರೆ ಸಾಕು ನಿಮ್ಮ ಸಮಸ್ಯೆಗಳೆಲ್ಲಾ, ಕಷ್ಟಗಳೆಲ್ಲ ದೂರವಾಗುತ್ತದೆ. ವೈವಾಹಿಕ ಸಮಸ್ಯೆ, ಚರ್ಮದ ರೋಗ,ಆರೋಗ್ಯದ ಸಮಸ್ಯೆಗಳು,ಸಂತಾನ ಹೀನತೆ ಹೀಗೆ ಹಲವು ಸಮಸ್ಯೆಗಳನ್ನು ಹೊತ್ತುಕೊಂಡು ಅಮ್ಮನಘಟ್ಟ ದೇವಸ್ಥಾನಕ್ಕೆ ಭಕ್ತಾದಿಗಳು ಬರುತ್ತಿರುತ್ತಾರೆ.
ಇಲ್ಲಿಯ ಸ್ಥಳೀಯರು ಜಾನುವಾರುಗಳಿಗೆ ಯಾವುದೇ ತೊಂದರೆ ಬಂದರು ಜೇನುಕಲ್ಲಮ್ಮ ದೇವಿಯ ಮೊರೆಹೋಗುತ್ತಾರೆ. ಹಾಲು, ತುಪ್ಪ, ಬೆಣ್ಣೆ ಎಂದರೆ ದೇವಿಗೆ ಬಲು ಇಷ್ಟ. ಆದ್ದರಿಂದ ಭಕ್ತಾದಿಗಳು ಮನೆಯಿಂದ ತುಪ್ಪವನ್ನು ತಂದು ದೇವಿಗೆ ಅರ್ಪಿಸುವುದು ಸರ್ವೇಸಾಮಾನ್ಯವಾಗಿದೆ. ಅಮ್ಮನ ಘಟ್ಟದಲ್ಲಿ ಮಂಗಳವಾರ ಹಾಗೂ ಶುಕ್ರವಾರದಂದು ಬೆಳಿಗ್ಗೆ 10 ಘಂಟೆಯಿಂದ 11.30 ರ ಒಳಗೆ ವಿಶೇಷವಾದ ಪೂಜೆಗಳು ನಡೆಯುತ್ತದೆ. ನವರಾತ್ರಿಯ ಸಮಯದಲ್ಲಿ ಪ್ರತಿದಿನವೂ 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬಂದು ಅಮ್ಮನವರ ದರ್ಶನವನ್ನು ಪಡೆದುಕೊಳ್ಳುತ್ತಾರೆ.8
ಜಮದಗ್ನಿ ಅವರಿಗೆ ತಮ್ಮ ಪತ್ನಿ ರೇಣುಕಾದೇವಿ ಮೇಲೆ ವಿರಸಗೊಂಡು ತಮ್ಮ ಮಗನಾದ ಪರಶುರಾಮನಿಗೆ ರೇಣುಕಾದೇವಿಯ ರುಂಡವನ್ನು ಕತ್ತರಿಸಲು ಹೇಳುತ್ತಾರೆ. ಪರಶುರಾಮರು ರುಂಡವನ್ನು ಕತ್ತರಿಸಿದಾಗ ಒಂದು ಅಂಶವು ಹಳೆ ಅಮ್ಮನ ಘಟ್ಟದ ಕಲ್ಲುಬಂಡೆಯ ಮಧ್ಯೆ ಬಂದು ನೆಲೆಸುತ್ತದೆ. ನಂತರ ಅದೇ ಶಕ್ತಿಯು ದೇವಿಯಾಗಿ ರೂಪುಗೊಳ್ಳುತ್ತದೆ. ಒಂದು ಸಮಯದಲ್ಲಿ ಭಕ್ತರು ದೇವರಿಗೆ ಮೈಲಿಗೆಯನ್ನು ಮಾಡಿದ್ದರಿಂದ ಹಳೆ ಅಮ್ಮನ ಘಟ್ಟವನ್ನು ತೊರೆದು ಹೊಸ ಅಮ್ಮನ ಘಟ್ಟಕ್ಕೆ ಆಗಮಿಸುತ್ತಾರೆ. ಶುಭದಿನಗಳಂದು ಅಸಂಖ್ಯಾತ ಭಕ್ತರು ಅಮ್ಮನ ಘಟ್ಟಕ್ಕೆ ಬಂದು ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಒಂದು ವೇಳೆ ಭಕ್ತಾದಿಗಳಿಗೆ ಜೇನು ಕಚ್ಚಿದರೆ ಭಕ್ತಾದಿಗಳಿಂದ ಅಮ್ಮನಿಗೆ ಮೈಲಿಗೆ ಆಗಿದೆ ಅಥವಾ ಅಮ್ಮನವರ ಮಾತಿನಂತೆ ಭಕ್ತಾದಿಗಳು ನಡೆದುಕೊಂಡಿಲ್ಲ ಎಂಬರ್ಥವನ್ನು ತಿಳಿಸುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ.